Monday 10 September 2012

ಶಿಕ್ಷಕರ ಕೊರತೆ ನೀಗಿಸಲು ಶೀಘ್ರ ಶಿಕ್ಷಕರ ನೇಮಕ

ಪ್ರಸ್ತಕ ವರ್ಷ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಕರು ನಿವೃತ್ತಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದೆ. ಹೀಗಾಗಿ ತಾತ್ಕಾಲಿಕ ಅತಿಥಿ ಶಿಕ್ಷಕರ ಹಾಗೂ ಕಾಯಂ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ನೀಡಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.

ಸೋಮವಾರ ಕಾರ್ಯಕ್ರಮವೊಂದಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿವೃತ್ತಿ ಅವಧಿ ಎರಡು ವರ್ಷ ವಿಸ್ತರಿಸಿದ ನಂತರ ಎರಡು ವರ್ಷದ ಮೇಲೆ ಪ್ರಸಕ್ತ ವರ್ಷ ನಿವೃತ್ತಿ ಆಗುವ ಶಿಕ್ಷಕರ ಸಂಖ್ಯೆ ಹೆಚ್ಚಿದ್ದು, ಶಿಕ್ಷಕರ ಕೊರತೆ ಕಂಡು ಬಂದಿದೆ ಎಂದರು.

ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತ ಕೂಡಲೇ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು. ಮುಖ್ಯಮಂತ್ರಿಗಳು ಕೂಡ ಈ ಬಗ್ಗೆ ಆಸಕ್ತಿ ವಹಿಸಿದ್ದು, ಅವರೂ ಕೂಡ ಹಣಕಾಸು ಇಲಾಖೆ ಅನುಮೋದನೆ ನೀಡುವಂತೆ ನಿರ್ದೇಶನ ಕೂಡ ನೀಡಿದ್ದಾರೆ. ಈಗಾಗಲೇ ಪ್ರೌಢಶಾಲೆಗೆ 3400 ಹಾಗೂ ಪದವಿ ಪೂರ್ವ ಕಾಲೇಜಿಗೆ 1700 ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗಿದೆ ಎಂದರು.

ಶಾಲಾ ವಾತಾವರಣ ಗುಣಮಟ್ಟಗೊಳಿಸುವ ನಿಟ್ಟಿನಲ್ಲಿ ಗ್ರಂಥಾಲಯ ಹಾಗೂ ಕ್ರೀಡೆಗೆ ಒತ್ತು ನೀಡಲಾಗುತ್ತಿದೆ. ಕಳೆದ ಬಾರಿ ಪುಸ್ತಕ ಮೇಳ ಆಯೋಜಿಸಿ ಎರಡೂ ಸಾವಿರಕ್ಕೂ ಅಧಿಕ ಶಾಲೆಗಳಿಗೆ ಪುಸ್ತಕ ಖರೀದಿಲು ಹಣ ನೀಡಲಾಗಿತ್ತು. ಈ ಸಲ ಅದನ್ನು ಹೆಚ್ಚಿಸಲಾಗಿದೆ. ಮಕ್ಕಳಲ್ಲಿ ಕ್ರೀಡಾ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಅನುಕೂಲವಾಗಲೆಂದು ಮಕ್ಕಳ ಕ್ರೀಡಾ ಸಾಮಗ್ರಿ ಖರೀದಿಸಲು ಪ್ರತಿ ಶಾಲೆಗೆ 4000 ರೂ.ಗಳ ಧನಸಹಾಯ ನೀಡಲಾಗುವುದು ಎಂದರು.

ಶಾಲೆಗಳ ನಿರ್ವಹಣೆಗೆ ಎಪಿಎಸ್‌ ಶಾಲೆಗೆ 5000 ಹಾಗೂ ಎಚ್‌ಪಿಎಸ್‌ ಶಾಲೆಗಳಿಗೆ 12,000 ರೂ. ಅನುದಾನ ನೀಡಲಾಗುತ್ತಿದೆ. ಆದರೆ ಈ ಸಲ ಇದರ ಜೊತೆಗೆ ಕೊಠಡಿ ಆಧರಿಸಿ ನಿರ್ವಹಣೆ ವೆಚ್ಚ ನೀಡಲು ನಿರ್ಧರಿಸಲಾಗಿದೆ. ಅಂದರೆ ಪ್ರತಿ ಕೊಠಡಿ ನಿರ್ವಹಣೆಗೆ 1500 ರೂ. ಹೆಚ್ಚಿಗೆ ನೀಡಲಾಗುವುದು. ಇದರಿಂದ ವರ್ಗದಲ್ಲಿ ಮಕ್ಕಳಿಗೆ ಸೂಕ್ತ ವ್ಯವಸ್ಥೆ ಒದಗಿಸುವ ಮೂಲ ಉದ್ದೇಶ ಹೊಂದಲಾಗಿದೆ ಎಂದರು.

ಮಕ್ಕಳ ಶೈಕ್ಷಣಿಕ ಅಭಿವೃದ್ಧಿ ನಿಟ್ಟಿನಲ್ಲಿ ಶಿಕ್ಷಕರ ಶ್ರಮ ಅಪಾರ. ಅದನ್ನು ಇನ್ನಷ್ಟು ಗುಣಪಡಿಸುವ ನಿಟ್ಟಿನಲ್ಲಿ ಮಕ್ಕಳ ಕಲಿಕಾ ಸಾಮಗ್ರಿ ಖರೀದಿಗೆ ಪ್ರತಿಯೊಬ್ಬ ಶಿಕ್ಷಕರಿಗೆ 500 ರೂ. ನೀಡಲಾಗುವುದು. ಮಕ್ಕಳಿಗೆ ತಕ್ಕ ಮಟ್ಟಿಗೆ ಸಂಗೀತಜ್ಞಾನ ವೃದ್ಧಿಸುವುದಕ್ಕೆ ಅನುಕೂಲವಾಗಲೆಂದು ಸಂಗೀತ ವಾದ್ಯಗಳ ಖರೀದಿಗೆ ಪ್ರತಿ ಶಾಲೆಗೆ 1500 ರೂ. ಅನುದಾನ ನೀಡಲಾಗುವುದು ಎಂದು ಕಾಗೇರಿ ತಿಳಿಸಿದರು.

ಪ್ರೊ| ಆರ್‌.ಗೋವಿಂದ ವರದಿಗೆ ಸಲಹೆ -ಸೂಚನೆಗಾಗಿಯೇ ವೈಬ್‌ಸೆಟ್‌ನಲ್ಲಿ ಹಾಕಲಾಗಿತ್ತು. ಸಲಹೆ ಸೂಚನೆಗೆ ಅವಧಿ ಕೂಡ ಈ ಹಿಂದೆ ನೀಡಿ ಅದನ್ನು ವಿಸ್ತರಣೆ ಕೂಡ ಮಾಡಲಾಗಿದೆ. ಈ ಅವಧಿ ಸದುಪಯೋಗವಾಗಿದೆ ಎಂಬುದು ನನ್ನ ಅನಿಸಿಕೆ. ಆದರೆ ಇನ್ನೂ ಅವಧಿ ವಿಸ್ತರಣೆ ಅಗತ್ಯಬಿದ್ದರೆ ಪರಿಶೀಲಿಸಿ ಕ್ರಮ ಕೈಗೊಳ್ಳುವೆ.
-ವಿಶ್ವೇಶ್ವರ ಹೆಗಡೆ ಕಾಗೇರಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ.

more :http://www.udayavani.com/news/187389L15-%E0%B2%B6-%E0%B2%95-%E0%B2%B7%E0%B2%95%E0%B2%B0-%E0%B2%95--%E0%B2%B0%E0%B2%A4--%E0%B2%A8-%E0%B2%97-%E0%B2%B8%E0%B2%B2--%E0%B2%B6-%E0%B2%98-%E0%B2%B0-%E0%B2%B6-%E0%B2%95-%E0%B2%B7%E0%B2%95%E0%B2%B0-%E0%B2%A8-%E0%B2%AE%E0%B2%95.html

No comments:

Post a Comment